ಲೂಕ 2
  • 1 ಆ ದಿನಗಳಲ್ಲಿ ಆದದ್ದೇನಂದರೆ ಲೋಕವೆಲ್ಲಾ ಖಾನೇಷುಮಾರಿ ಬರೆಯಿಸಿಕೊಳ್ಳಬೇಕೆಂದು ಕೈಸರನಾದ ಔಗುಸ್ತನಿಂದ ಆಜ್ಞೆಯು ಹೊರಟಿತು.
  • 2 ಕುರೇನ್ಯನು ಸಿರಿಯಾಕ್ಕೆ ಅಧಿಪತಿಯಾಗಿದ್ದಾಗ ಈ ಖಾನೇಷುಮಾರಿಯು ಮೊದಲನೆಯ ಸಾರಿ ನಡೆ ಯಿತು.
  • 3 ಆಗ ಎಲ್ಲರೂ ಖಾನೇಷುಮಾರಿ ಬರೆಯಿಸಿ ಕೊಳ್ಳುವದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಕ್ಕೆ ಹೋದರು.
  • 4 (ಯೋಸೇಫನು ದಾವೀದನ ಮನೆತನ ದವನೂ ವಂಶದವನೂ ಆಗಿದ್ದದರಿಂದ) ಅವನು ಸಹ ಗಲಿಲಾಯದ ನಜರೇತೆಂಬ ಪಟ್ಟಣದಿಂದ ಯೂದಾ ಯದಲ್ಲಿ ಬೇತ್ಲೆಹೇಮ್‌ ಎಂದು ಕರೆಯಲ್ಪಟ್ಟ ದಾವೀದನ ಪಟ್ಟಣಕ್ಕೆ
  • 5 ತನಗೆ ನಿಶ್ಚಯಮಾಡಲ್ಪಟ್ಟಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಖಾನೇಷುಮಾರಿ ಬರೆಸಿಕೊಳ್ಳುವದಕ್ಕಾಗಿ ಹೋದನು.
  • 6 ಹೀಗೆ ಅವರು ಅಲ್ಲಿ ಇದ್ದಾಗ ಆಕೆಗೆ ಹೆರಿಗೆಯ ದಿವಸಗಳು ಪೂರ್ಣವಾದವು.
  • 7 ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಗಳಿಂದ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಆತನನ್ನು ಗೋದ ಲಿಯಲ್ಲಿ ಮಲಗಿಸಿದಳು.
  • 8 ಆಗ ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು.
  • 9 ಇಗೋ, ಕರ್ತನ ದೂತನು ಅವರ ಬಳಿಗೆ ಬಂದನು. ಆಗ ಕರ್ತನ ಮಹಿಮೆಯು ಅವರ ಸುತ್ತಮುತ್ತಲೂ ಪ್ರಕಾಶಿ ಸಿತು; ಆದದರಿಂದ ಅವರು ಬಹಳವಾಗಿ ಹೆದರಿದರು.
  • 10 ಆದರೆ ದೂತನು ಅವರಿಗೆ--ಹೆದರಬೇಡಿರಿ; ಯಾಕಂದರೆ ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ.
  • 11 ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ.
  • 12 ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು.
  • 13 ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ--
  • 14 ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
  • 15 ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
  • 16 ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.
  • 17 ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು.
  • 18 ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.
  • 19 ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಆಲೋಚಿಸುತ್ತಿದ್ದಳು.
  • 20 ತಮಗೆ ತಿಳಿಸಲ್ಪಟ್ಟಂತೆ ಕುರುಬರು ತಾವು ಕೇಳಿದ್ದ ಮತ್ತು ನೋಡಿದ್ದ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ ಕೊಂಡಾಡುತ್ತಾ ಹಿಂದಿರುಗಿದರು.
  • 21 ಶಿಶುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಎಂಟು ದಿನಗಳು ಕಳೆದ ಮೇಲೆ ಆತನನ್ನು ಗರ್ಭಧರಿಸು ವದಕ್ಕಿಂತ ಮುಂಚಿತವಾಗಿ ದೂತನು ಹೆಸರಿಟ್ಟಂತೆಯೇ ಆತನು ಯೇಸು ಎಂದು ಕರೆಯಲ್ಪಟ್ಟನು.
  • 22 ಮೋಶೆಯ ನ್ಯಾಯಪ್ರಮಾಣದ ಪ್ರಕಾರ ಆಕೆಯ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ ಅವರು ಆತನನ್ನು ಕರ್ತನಿಗೆ ಸಮರ್ಪಿಸುವದಕ್ಕಾಗಿ ಯೆರೂಸಲೇಮಿಗೆ ತಂದರು.
  • 23 (ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).
  • 24 ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು.
  • 25 ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು.
  • 26 ಕರ್ತನಾಗಿರುವ ಕ್ರಿಸ್ತನನ್ನು ಅವನು ನೋಡುವದಕ್ಕಿಂತ ಮುಂಚೆ ಮರಣ ಹೊಂದುವದಿಲ್ಲವೆಂದು ಪರಿಶುದ್ಧಾತ್ಮನಿಂದ ಅವನಿಗೆ ಪ್ರಕಟವಾಗಿತ್ತು.
  • 27 ಅವನು ಆತ್ಮನಿಂದ ದೇವಾಲಯದೊಳಗೆ ಬಂದನು; ಶಿಶುವಾದ ಯೇಸುವಿನ ತಂದೆತಾಯಿಗಳು ನ್ಯಾಯಪ್ರಮಾಣದ ಪದ್ಧತಿಯ ಪ್ರಕಾರ ಮಾಡುವದಕ್ಕಾಗಿ ಆತನನ್ನು ಒಳಗೆ ತಂದರು.
  • 28 ಆಗ ಅವನು (ಸಿಮೆಯೋನನು) ಆತನನ್ನು ತನ್ನ ಕೈಗಳಲ್ಲಿ ತಕ್ಕೊಂಡು ದೇವರನ್ನು ಕೊಂಡಾಡುತ್ತಾ--
  • 29 ಕರ್ತನೇ, ಈಗ ನಿನ್ನ ಮಾತಿನ ಪ್ರಕಾರ ನಿನ್ನ ದಾಸನನ್ನು ಸಮಾಧಾನದಲ್ಲಿ ಹೋಗ ಮಾಡುತ್ತೀ;
  • 30 ಯಾಕಂದರೆ ನನ್ನ ಕಣ್ಣುಗಳು ನಿನ್ನ ರಕ್ಷಣೆಯನ್ನು ನೋಡಿದವು.
  • 31 ಅದನ್ನು (ಆ ರಕ್ಷಣೆಯನ್ನು) ನೀನು ಎಲ್ಲಾ ಜನರ ಮುಂದೆ ಸಿದ್ಧ ಪಡಿಸಿದ್ದೀ.
  • 32 ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ ಆಗಿದೆ ಅಂದನು.
  • 33 ಆಗ ಅವನು ಹೇಳಿದ ಮಾತುಗಳಿಗಾಗಿ ಯೋಸೇಫನೂ ಆತನ ತಾಯಿಯೂ ಆಶ್ಚರ್ಯಪಟ್ಟರು.
  • 34 ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.
  • 35 ಅನೇಕರ ಹೃದಯ ಗಳ ಅಲೋಚನೆಗಳು ಪ್ರಕಟವಾಗುವವು. (ಹೌದು, ನಿನ್ನ ಸ್ವಂತ ಪ್ರಾಣವನ್ನು ಸಹ ಕತ್ತಿಯು ತಿವಿಯುವದು) ಅಂದನು.
  • 36 ಅಲ್ಲಿ ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು; ಅವಳು ಬಹು ಮುಪ್ಪಿನವಳು; ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು.
  • 37 ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು.
  • 38 ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು.
  • 39 ಅವರು ಕರ್ತನ ನ್ಯಾಯ ಪ್ರಮಾಣದ ಪ್ರಕಾರ ಎಲ್ಲವುಗಳನ್ನು ಮಾಡಿ ಮುಗಿ ಸಿದ ಮೇಲೆ ತಮ್ಮ ಸ್ವಂತ ಪಟ್ಟಣವಾದ ಗಲಿಲಾಯದ ನಜರೇತಿಗೆ ಹಿಂದಿರುಗಿದರು.
  • 40 ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.
  • 41 ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು.
  • 42 ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು.
  • 43 ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ.
  • 44 ಆದರೆ ಆತನು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿ ಚಯವಾದವರಲ್ಲಿಯೂ ಆತನನ್ನು ಹುಡುಕಿದರು.
  • 45 ಆದರೆ ಅವರು ಆತನನ್ನು ಕಂಡುಕೊಳ್ಳದೆ ಹೋದ ದರಿಂದ ಆತನನ್ನು ಹುಡುಕುತ್ತಾ ಮತ್ತೆ ಯೆರೂಸ ಲೇಮಿಗೆ ಹಿಂತಿರುಗಿ ಬಂದರು.
  • 46 ಮೂರು ದಿವಸ ಗಳಾದ ಮೇಲೆ ಆತನು ದೇವಾಲಯದಲ್ಲಿ ಬೋಧಕರ ನಡುವೆ ಕೂತುಕೊಂಡು ಅವರ ಮಾತುಗಳನ್ನು ಕೇಳಿಸಿ ಕೊಳ್ಳುತ್ತಾ ಅವರನ್ನು ಪ್ರಶ್ನಿಸುತ್ತಾ ಇರುವದನ್ನು ಅವರು ಕಂಡರು.
  • 47 ಆತನು ಆಡಿದ ಮಾತುಗಳನ್ನು ಕೇಳಿದ ವರೆಲ್ಲರು ಆತನ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾ ದರು.
  • 48 ಅವರು (ತಂದೆ ತಾಯಿಗಳು) ಆತನನ್ನು ನೋಡಿದಾಗ ಆಶ್ಚರ್ಯಪಟ್ಟರು; ಆಗ ಆತನ ತಾಯಿಯು ಆತನಿಗೆ--ಮಗನೇ, ನೀನು ನಮಗೆ ಹೀಗೇಕೆ ಮಾಡಿದಿ? ಇಗೋ, ನಿನ್ನ ತಂದೆಯೂ ನಾನೂ ವ್ಯಥೆಯಿಂದ ನಿನ್ನನ್ನು ಹುಡುಕಿದೆವು ಅಂದಳು.
  • 49 ಆತನು ಅವರಿಗೆ--ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಕೆಲಸದಲ್ಲಿ ಇರಬೇಕಾದದ್ದು ಅಗತ್ಯವಾಗಿತ್ತೆಂದು ನಿಮಗೆ ತಿಳಿಯಲಿಲ್ಲವೋ ಅಂದನು.
  • 50 ಆದರೆ ಆತನು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ.
  • 51 ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆದರೆ ಆತನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಇಟ್ಟುಕೊಂಡಳು.
  • 52 ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.