ಆದಿಕಾಂಡ 2
  • 1 ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು.
  • 2 ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
  • 3 ದೇವರು ಏಳನೆಯ ದಿನವನ್ನು ಆಶೀರ್ವದಿಸಿ ಅದನ್ನು ಪವಿತ್ರಮಾಡಿದನು; ಯಾಕಂ ದರೆ ಆ ದಿನದಲ್ಲಿ ತಾನು ಸೃಷ್ಟಿಸಿದ ಮತ್ತು ಮಾಡಿದ ತನ್ನ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.
  • 4 ಇದೇ ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ.
  • 5 ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ.
  • 6 ಆದರೆ ಭೂಮಿ ಯೊಳಗಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು.
  • 7 ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.
  • 8 ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು.
  • 9 ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು, ತೋಟದ ಮಧ್ಯದಲ್ಲಿ ಜೀವದ ಮರವನ್ನು, ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು.
  • 10 ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು.
  • 11 ಮೊದಲನೆಯದರ ಹೆಸರು ಪೀಶೋನ್‌; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು; ಅದರಲ್ಲಿ ಬಂಗಾರವಿದೆ.
  • 12 ಆ ದೇಶದ ಬಂಗಾರವು ಉತ್ತಮವಾದದ್ದು; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ.
  • 13 ಎರಡನೆಯ ನದಿಯ ಹೆಸರು ಗೀಹೋನ್‌; ಅದು ಕೂಷ್‌ ದೇಶವನ್ನೆಲ್ಲಾ ಸುತ್ತುವದು.
  • 14 ಮೂರನೆಯ ನದಿಯ ಹೆಸರು ಹಿದ್ದೆಕೆಲ್‌; ಅದು ಅಶ್ಶೂರದ ಪೂರ್ವದ ಕಡೆಗೆ ಹರಿಯುವದು. ನಾಲ್ಕನೆಯ ನದಿಯು ಯೂಫ್ರೇಟೀಸ್‌.
  • 15 ಆಗ ಕರ್ತನಾದ ದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್‌ ತೋಟ ವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು.
  • 16 ದೇವರಾದ ಕರ್ತನು ಮನುಷ್ಯ ನಿಗೆ ಆಜ್ಞಾಪಿಸಿದ್ದೇನಂದರೆ--ನೀನು ತೋಟದ ಎಲ್ಲಾ ಮರಗಳ ಫಲವನ್ನು ಯಥೇಚ್ಛವಾಗಿ ತಿನ್ನಬಹುದು;
  • 17 ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು.
  • 18 ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು.
  • 19 ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು. ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.
  • 20 ಆದಾ ಮನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಅಡವಿಯ ಎಲ್ಲಾ ಮೃಗಗಳಿಗೂ ಹೆಸರಿಟ್ಟನು, ಆದರೆ ಆದಾಮನಿಗೆ ತಕ್ಕ ಸಹಕಾರಿ ಸಿಗಲಿಲ್ಲ.
  • 21 ಕರ್ತನಾದ ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿದ್ದರಿಂದ ಅವನು ನಿದ್ರೆಮಾಡಿದನು; ಆಗ ಆತನು ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತಕ್ಕೊಂಡು ಅದಕ್ಕೆ ಬದಲಾಗಿ ಮಾಂಸವನ್ನು ಮುಚ್ಚಿದನು.
  • 22 ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು.
  • 23 ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು.
  • 24 ಆದದರಿಂದ ಮನುಷ್ಯನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರು ಒಂದೇ ಶರೀರ ವಾಗಿರುವರು.
  • 25 ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.